ಉಪವಾಸದ ವೈಜ್ಞಾನಿಕ ರಹಸ್ಯ
ಪವಿತ್ರ ರಮಳಾನ್ , ಸತ್ಯವಿಶ್ವಾಸಿಯ ಮಟ್ಟಿಗೆ ಅಸಂಖ್ಯ ಪುಣ್ಯಗಳನ್ನು ಸಂಪಾದಿಸಲು ಮತ್ತು ಅಲ್ಲಾಹನ ಸಾಮಿಪ್ಯ ಮತ್ತು ಸಂಪ್ರೀತಿಯನ್ನು ಪಡೆಯುವ ಬಹಳ ಪ್ರಮುಖ ಸಮಯವಾಗಿದೆ, ರಮಳಾನ್ ನಲ್ಲಿ ಉಪವಾಸವು ಅದರ ಒಂದು ಅವಿಭಾಜ್ಯ ಅಂಗವಾಗಿದೆ, ಉಪವಾಸ ಮೂಲಕ ನಿರ್ದಿಷ್ಟ ಸಮಯದ ತನಕ ಅನ್ನ ಪಾನೀಯ ವರ್ಜಿಸುವುದರೊಂದಿಗೆ ಇನ್ನಿತರ ಭೋಗಾಸಕ್ತಿ ಮತ್ತು ಇಂದ್ರಿಯಗಳನ್ನು ವ್ಯವಸ್ಥಿತವಾಗಿ ಸಮತೋಲನದಲ್ಲಿಡಲು ಉದ್ದೇಶಿಸಲಾಗುತ್ತದೆ. ಇಂಥ ಸಮತೋಲನಾವಸ್ಥೆ ಯಿಂದ ಸ್ವೇಚ್ಹೆ ಮನೋಭಾವಗಳು , ದುಷ್ಪ್ರೆರಣೆಗಳು, ದುಶ್ಚಟಗಳು, ಪಾಪ ಮಾಡಲಿರುವ ವಾಂಛೆಯು ಕಡಿಮೆಯಾಗುತ್ತವೆ . ಇದು ಮನುಶ್ಯನನ್ನು ನೇರ ಮತ್ತು ಸ್ವಚ್ಚ ದಾರಿಗೆ ಕೊಂಡೊಯ್ಯುವ ಅಂಶಗಳಾಗಿವೆ , ಇದುವೇ ಉಪವಾಸವು ನಿಮಗೆ ಕಡ್ಡಾಯಗೊಳಿಸಿದ್ದು ನೀವು ಅಲ್ಲಾಹನನ್ನು ಭಯಪಡುವರಾಗಲು ಎಂಬುದರ ನ ತಾತ್ಪರ್ಯ.
ಸ್ವಯಂ ನಿರಾಕರಣೆ ಮತ್ತು ವೈರಾಗ್ಯವು ಕೆಲವೊಂದು ಸಂಧರ್ಭಗಳು ಮತ್ತು ಕೆಲವು ಕಾರ್ಯಗಳು, ವಸ್ತುಗಳ ಬಗ್ಗೆ ಮನುಷ್ಯ ಜೀವನದಲ್ಲಿ ಅತ್ಯವಶ್ಯಕವಾಗಿದೆ. ನಿರ್ದಿಷ್ಟ ರೋಗಿಗಳಿಗೆ ಕೆಲವೊಂದು ಆಹಾರಗಳನ್ನು ತ್ಯಜಿಸಲು ಅನಿವಾರ್ಯವಾಗಿ ಶಿಫಾರಸು ಮಾಡಲಾಗುತ್ತದೆ, ಆಗ ರೋಗಿಯು ಸ್ವಯಂ ನಿರಾಕರಣೆ ಮತ್ತು ವೈರಾಗ್ಯದ ಸ್ಥಿತಿಯನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುತ್ತಾನೆ. ಇದೇ ರೀತಿ ನಮಗೆ ನಮ್ಮ ಮತ್ತು ನಾವು ಜೀವಿಸುವ ಜಗತ್ತಿನ ಶಾಂತ ಮತ್ತು ಅರೋಗ್ಯಕರ ವ್ಯವಸ್ಥೆಗೆ ಕೆಲವೊಂದು ದುಶ್ಚಟ ಮತ್ತು ಕೆಡುಕು ಕಾರ್ಯಗಳಿಂದ ದೂರ ನಿಲ್ಲಲು ನಮ್ಮ ಇಂದ್ರಿಯಗಳು ಪ್ರಸ್ತುತ ಕಾರ್ಯಗಳಿಂದ ನಿರಾಕರಣೆ ಮತ್ತು ವೈರಾಗ್ಯವನ್ನು ಪಾಲಿಸಬೇಕಾಗುತ್ತದೆ, ಇದು ಇಂದ್ರಿಯಗಳನ್ನು ಸಮತೋಲನಾವಸ್ಥೆಯಲ್ಲಿಡುತ್ತದೆ, ಮತ್ತು ಅಧ್ಯಾತ್ಮಿಕ ಜೀವನದ ಕಡೆ ನಮ್ಮ ಆತ್ಮವನ್ನು ತೆರೆದಿಡುತ್ತದೆ. ಇಂತಹ ಒಂದು ಆತ್ಮ ಸಂಯಮ ಸತ್ಯವಿಶ್ವಾಸಿಯ ಜೀವನದಲ್ಲಿ ವಿಶೇಷವಾಗಿ ರಮಳಾನ್ ಉಪವಾಸದಲ್ಲಿ ಹೆಚ್ಚು ಕಾಣಬಹುದು, ಉಪವಾಸವು ಅತ್ಮದ ಅಶಿಸ್ತಿನ ಪ್ರವೃತಿಗಳು ಏಕ ಪ್ರಕಾರವಾಗಿ ನಿರ್ಭಂದಿಸಿ ಪರಿಶುದ್ಧತೆಯನ್ನು ಒಪ್ಪಿಕೊಳ್ಳಲು ಪ್ರೆರೇಪಿಸುತ್ತದೆ. ಶಹ್ ಬಾ ನ್ ತಿಂಗಳಲ್ಲಿ ಹೆಚ್ಚು ಉಪವಾಸಗಳನ್ನು ಕೈಗೊಂಡ ಪ್ರವಾದಿ ಮುಹಮ್ಮದ್ ( ಸ್ವಲ್ಲಲ್ಲಾಹು ಅಲೈಹಿವ ಸ್ವಲ್ಲಮ್ )ರವರೊಂದಿಗೆ ಅದರ ಬಗ್ಗೆ ಉಸಾಮತ್ ಬ್ ನ್ ಝೈದ್ (ರ) ರವರು ಕೇಳಿದಾಗ ಪ್ರವಾದಿ ( ಸ್ವಲ್ಲಲ್ಲಾಹು ಅಲೈಹಿವ ಸ್ವಲ್ಲಮ್ ) ಹೇಳಿದರು ರಜಬ್ ಮತ್ತು ರಮಳಾನ್ ನ ಮಧ್ಯೆಯಿರುವ ಶಹ್ ಬಾನ್ ನಲ್ಲಿ ಜನರು ಹೆಚ್ಚು ಗಮನ ಹರಿಸದ ಮಾಸವಾಗಿದ್ದು, ಲೋಕ ಪಾಲಕನಾದ ಅಲ್ಲಾಹನ ಕಡೆಗೆ ಸತ್ಕರ್ಮಗಳನ್ನು ಎತ್ತಲ್ಪಡುವ ಈ ತಿಂಗಳಲ್ಲಿ ಅಲ್ಲಾಹನು ನನ್ನ ಸತ್ಕರ್ಮವನ್ನು ತನ್ನ ಬಳಿ ಎತ್ತುವಾಗ ( ಸ್ವೀಕರಿಸುವಾಗ) ನಾನು ಉಪವಾಸಿಗನಾಗಿರಲು ಬಯಸುತ್ತೇನೆ ’ ಎಂದು ಹೇಳಿರುವುದು ಅಲ್ಲಾಹು ಮತ್ತು ಮನುಷ್ಯನೆಡೆಯಲ್ಲಿರಬೇಕಾದ ಗಾಢ ಸಂಭಂಧವು ಉಪವಾಸದ ಸಮಯದಲ್ಲಿರುವಾಗ ಸತ್ಯವಿಶ್ವಾಸಿಗುಟಾಗಬೇಕಾದ ಶ್ರೇಷ್ಟ ಸ್ಥಿತಿಯ ಬಗ್ಗೆ ತಿಳಿಸುತ್ತದೆ.

ಅನೇಕ ಉತ್ತಮ ಗುಣಗಳು ರಮಳಾನ್ ತಿಂಗಳಲ್ಲಿ ಉಪವಾಸಿಗನಲ್ಲಿ ಸ್ಪಷ್ತವಾಗಿ ರೂಪುಗೊಳ್ಳುತ್ತವೆ, ಪ್ರಸ್ತುತ ಸಮಯದಲ್ಲಿ ಓರ್ವ ವ್ಯಕ್ತಿ ಸುಲಭವಾಗಿ ತನ್ನ ಜೀವನದಲ್ಲಿ ಧನಾತ್ಮಕ ಬದಲಾವಣೆಗಳ ಬಗ್ಗೆ ಮತ್ತು ಅತ್ಮ ಮೌಲ್ಯ ಮಾಪನ ನಡೆಸುವತ್ತ ಆಲೋಚಿಸುತ್ತಾನೆ, ಉಪವಾಸದ ಸಮಯಗಳಲ್ಲಿ ಚೆನ್ನಾಗಿ ಅತ್ಮ ಸಂಯಮನವನ್ನು ಮಾಡಿದರೆ ಆತ್ಮ ಸುಧಾರಣೆಯು ಮುಂದಿನ ವರ್ಷದುದ್ದಕ್ಕೂ ಮುಂದುವರಿಯುತ್ತದೆ ಮತ್ತು ಆತ್ಮ ಪರಿಶೋಧನೆ ಮತ್ತು ಹಠಾತ್ ಬದಲಾವಣೆಯು ಸಂಭವಿಸುತ್ತದೆ ಮತ್ತು ಹೆಚ್ಚು ಸಕ್ರಿಯನಾದ ದೇವ ಭಕ್ತನಾಗಿ ಮಾರ್ಪಾಡಾಗುತ್ತಾನೆ.
ದಾರಿಯಲ್ಲಿರುವ ತೊಂದರೆಗಳನ್ನು ನಿವಾರಿಸಲು , ಜನರು ನಡೆದಾಡುವ , ಸ್ಥಳದಲ್ಲಿ ಮಲಮೂತ್ರ ವಿಸರ್ಜನೆ ಮಾಡದಿರಲು , ಮನುಷ್ಯ ಸಹಿತ ಯಾವುದೇ ಇತರ ಜೀವಿಗಳಿಗೆ ಉಪದ್ರವಿಸದಿರಲು ಇಸ್ಲಾಮ್ ಆದೇಶಿಸುವಾಗ ಅದರಲ್ಲೆಲ್ಲಾ ಇತರರಿಗೆ ಯಾವುದೇ ಹಾನಿ ಉಂಟಾಗ ಬಾರದೆಂಬ ವ್ಯಕ್ತವಾದ ಸಂದೇಶ ವನ್ನು ಸಾರುವ ಇಸ್ಲಾಮ್ ಉಪವಾಸ ಮೂಲಕವೂ ಮನುಷ್ಯನ ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿಯನ್ನು ಮಾಡುವುದಿಲ್ಲ ಪರಂತು ಅನೇಕ ಆರೋಗ್ಯ ಸುಧಾರಣೆಯ ಅಂಶಗಳು ಉಪವಾಸದಲ್ಲಿ ಅಡಕವಾಗಿವೆ ಎಂಬುದು ಗಮನಾರ್ಹವಾಗಿದೆ.
1994 ರಲ್ಲಿ ಮೊರೋಕ್ಕೊದ ಕಾಸಾಬ್ಲಾಂಕದಲ್ಲಿ ನಡೆದ ಮೊದಲ ಅಂತರಾಷ್ಟೀಯ ಕಾಂಗ್ರೇಸ್ ನಡೆಸಿದ “ಆರೋಗ್ಯ ಮತ್ತು ರಮದಾನ್ ” ಸೆಮಿನಾರ್ ನಲ್ಲಿ ಜಗತ್ತಿನ ಮುಸ್ಲಿಮ್ ಮತ್ತು ಮುಸ್ಲಿಮೇತರ ಸಂಶೋಧಕರು ರಮಳಾನ್ ಉಪವಾಸದ ಬಗ್ಗೆ ಆಳವಾದ ಅಧ್ಯಯನ ನಡೆಸಿದ 50 ಸಂಶೋಧನಾ ಪ್ರಭಂಧಗಳನ್ನು ಮಂಡಿಸಿದ್ದರು, ಪ್ರಸ್ತುತ ಪ್ರಭಂದಗಳು ಉಪವಾಸವು ಯಾವುದೇ ರೀತಿಯಲ್ಲಿಯೂ ರೋಗಿಯ ಆರೋಗ್ಯವನ್ನು ಹಾನಿ ಮಾಡುವುದಿಲ್ಲ ಹಾಗೂ ಅನೇಕ ಆರೋಗ್ಯ ಸುಧಾರಣೆಗಳ ಬಗ್ಗೆ ಪ್ರತಿಪಾದಿಸಿದವು. ಹಾಗೂ ತೀವ್ರ ಮದುಮೇಹ ಪರಿಧಮನಿ ರೋಗ, ಮೂತ್ರಪಿಂಡದಲ್ಲಿ ಕಲ್ಲುಗಳು ಇತ್ಯಾದಿಗಳಿಂದ ಬಳಲುತ್ತಿರುವ ರೋಗಿಗಳು ಉಪವಾಸ ಹಿಡಿಯದಿರಲು ಶಿಪಾರಸು ಮಾಡಿತು.
ಹೃದಯರೋಗ, ಸಂಧಿವಾತ ಅಸ್ತಮಾ ಮ್ ಮಲಭದ್ದತೆ , ಚರ್ಮರೋಗಗಳ ಕಡಿಮೆಗೆ ಉಪವಾಸವು ಅನುಕೂಲವಾಗುತ್ತದೆ. ಆದರೆ ಮನುಷ್ಯನಿಗೆ ದೈವದತ್ತವಾಗಿ ಸಿಕ್ಕಿದ ತನ್ನ ಆರೋಗ್ಯವು ಕೆಟ್ಟುಹೋಗಲು ಅವನು ಯಾವುದೇ ಮಿತಿಯಿಲ್ಲದೇ ಮತ್ತು ವ್ಯವಸ್ಥಿತವಿಲ್ಲದೇ ಸೇವಿಸುವ ಆಹಾರವೇ ಮುಖ್ಯ ಕಾರಣವಾಗಿದೆ.
ಪಾಶ್ಚಾತ್ಯ ಮೆಡಿಸಿನ್ ನ ಪಿತಾಮಹಾರೆಂದು ಕರೆಯಲ್ಪಡುವ ಹಿಪ್ಪೊಕ್ರಾಟ್ಸ್, ಗೇಲನ್ ಮತ್ತು ಪ್ಯಾರಾಸೆಲ್ಸಸ್ ರವರು ಉಪವಾಸವನ್ನು ಮಹತ್ತರವಾದ ರೋಗನಿವಾರಕ ಮತ್ತು ದೇಹದೊಳಗಿರುವ ವೈದ್ಯ ಎಂದು ಘೋಷಿಸಿದ್ದಾರೆ,
ಅಮೇರಿಕಾದಲ್ಲಿ, ವೈದ್ಯಕೀಯ ಸಾಂಪ್ರದಾಯಿಕತೆಯು, ಉಪವಾಸವನ್ನು ಋಣಾತ್ಮಕವಾಗಿ ವೀಕ್ಷಿಸುತ್ತಿದ್ದರು ಮತ್ತು ನಿರ್ದಿಷ್ಟವಾಗಿ ಒಂದು ಚಿಕಿತ್ಸಕ ಸಾಧನವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ವೈದ್ಯಕೀಯ ವೃತ್ತಿಯನ್ನು ಅನಾರೋಗ್ಯದ ಚಿಕಿತ್ಸೆಯಿಂದ ಅನಾರೋಗ್ಯವನ್ನು ತಡೆಗಟ್ಟುವ ಕಡೆಗೆ ಬದಲಾವಣೆಯಾದಾಗ ಉಪವಾಸವು ರೋಗ ನಿವಾರಕವಾಗಿ ಹೆಚ್ಚು ಜನಪ್ರಿಯವಾದವು.
1952 ರಲ್ಲಿ ಅನೇಕ ಹೆಸರಾಂತ ಬಚಿಂಗರ್ ಕ್ಲೀನಿಕ್ ಗಳನ್ನು ಯುರೋಪ್ ನಲ್ಲಿ ಸ್ಥಾಫಿಸಿದ ಜರ್ಮನಿಯ ಪ್ರಸಿದ್ದ ಉಪವಾಸ ಚಿಕಿತ್ಸಕ ಓಟೋ ಬಚಿಂಗರ್ M.D ಹೇಳುತ್ತಾರೆ
"ಉಪವಾಸವು, ಯಾವುದೇ ಅನುಮಾನ ಇಲ್ಲದೇ ಜೈವಿಕ ವಿಜ್ಞಾನದ ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸೆಯ ವಿಧಾನವಾಗಿದೆ, ... ಇದು ಶಸ್ತ್ರ ಕ್ರಿಯೆ ಇಲ್ಲದ ಚಿಕಿತ್ಸೆಯಾಗಿದೆ,ಉಪವಾಸದಿಂದ ರೋಗಿಯ ದೈಹಿಕ ಆರೋಗ್ಯ ಸುಧಾರಣೆಯಾಗುತ್ತದೆ
ಉಪವಾಸವು ದೇಹದ ತೂಕ ಕಡಿಮೆ ಗೊಳಿಸಲು, ಚಿಕಿತ್ಸೆಗಾಗಿ ಮತ್ತು ದೀರ್ಘಾಯುಷ್ಯ-ಹೆಚ್ಚಿಸಲು ಅತ್ಯಂತ ಪರಿಣಾಮ ಕಾರಿಯಾಗಿದ್ದು ಎಂದು ಹಲವು ಸಾವಿರ ವರ್ಷಗಳ ಮಾನವ ಕುಲದ ಪದ್ದತಿಯಲ್ಲಿ ಸಾಬೀತಾಗಿದೆ,
ಹಿಮಕರಡಿಗಳು ,ವ್ಹೇಲ್ಸ್, ಸಾಲ್ಮನ್, ಹಾವುಗಳು, ಜೇಡ, ಆಮೆಗಳು, ಇತ್ಯಾದಿ ಜೀವಿಗಳು ಸೇರಿದಂತೆ ಹೆಚ್ಚು ಸಣ್ಣ ಜೀವಿಗಳು ಪ್ರತಿ ವರ್ಷವೂ ಹಲವು ತಿಂಗಳು ಗಳ ಕಾಲ ಆಹಾರ ಸೇವಿಸದೇ ಉಪವಾಸದಲ್ಲಿರುತ್ತವೆ, ಮನುಷ್ಯನ ದೇಹವು ಸ್ವಯಂಜೀರ್ಣಿಕೆ ಮೂಲಕ ಅದು ಸಂಗ್ರಹಿಸಿದ ವಸ್ತುವಿನ ಮೂಲಕ ಜೀವಿಸಲು ವ್ಯವಸ್ಥಿತ ಪೂರ್ಣವಾಗಿ ವಿನ್ಯಾಸಗೊಳಿಸಲಾಗಿದೆ, ಆಶ್ಚರ್ಯಕರವಾದ ರೀತಿಯಲ್ಲಿ ದೇಹವು ರೋಗಪೀಡಿತ. ದುರ್ಬಲ , ವಯಸ್ಸಿನ, ಸತ್ತ, ಮತ್ತು ಹಾನಿಗೊಳಗಾದ ಜೀವಕೋಶಗಳನ್ನು ಕೊಲ್ಲುವಂಥ ಕೋಶಗಳನ್ನು ಉತ್ಪತ್ತಿಮಾಡುತ್ತದೆ.
ಲೀಸೆಸ್ಟರ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಇದರ ಮುಖ್ಯಸ್ಥರಾದ ಡಾ Wisniewski, ಹೇಳುತ್ತಾರೆ: ವಿಶ್ವದ ಅನೇಕ ಮುಸ್ಲಿಮರಿಗೆ ರಂಜಾನ್ ಸ್ವಯಂ ಸುಧಾರಣೆಯ ಬಹಳ ಪ್ರಮುಖ ಅವಧಿಯನ್ನು ಪ್ರತಿನಿಧಿಸುತ್ತದೆ - ಇದು ಪ್ರಸ್ತುತ ತಿಂಗಳ ಮತ್ತು ನಂತರದ ಅವರ ಜೀವನಕ್ಕೆ ಆಕಾರಕೊಡುವಂಥ ಆಧ್ಯಾತ್ಮಿಕ ಮತ್ತು ನೈತಿಕ ತರಬೇತಿಯನ್ನು ಪ್ರತಿನಿಧಿಸುತ್ತದೆ, ಇಸ್ಲಾಮ್ ನ ಅನುಯಾಯಿಗಳು ಸಮಾಜದ ಕೆಲ ವರ್ಗದ ಬಡ ಜನರಿಗೆ ಸಹಾಯ ಮಾಡಲು ಕ್ಷಮೆ ಮತ್ತು ಸಹಾನುಭೂತಿ ತೋರಿಸಲು, ಮತ್ತು ಪರಸ್ಪರ ಸಂಭಂಧ ಸುಧಾರಣೆ ಕಡೆಗೆ ಪ್ರವರ್ತಿಸುವುದನ್ನು ನಿರೀಕ್ಷಿಸಲಾಗಿದೆ.
"ರಮಳಾನ್ ಸಾಮಾಜಿಕ ಮತ್ತು ಕುಟುಂಬ ಸಂಬಂಧವನ್ನು ಬಲಪಡಿಸುತ್ತದೆ, ಪ್ರಭಾತದಿಂದ ಸೂರ್ಯಸ್ತಮಿಸುವ ತನಕ ವಿರುವ ಉಪವಸವು ರಮಳಾನ್ ನ ಅವಿಭಾಜ್ಯ ಅಂಗವಾಗಿದೆ, ಹಲವಾರು ಶೈಕ್ಷಣಿಕ ಅಧ್ಯಯನಗಳು ರಮಳಾನ್ ಉಪವಾಸದಿಂದ ಶರೀರದಲ್ಲಿರುವ ಕೆಟ್ಟ ಕೊಲಸ್ಟ್ರಾಲ್, ಮತ್ತು ಮಿತಿಮೀರಿದ ಕೊಬ್ಬಿನಾಂಶ ಕಡಿಮೆಯಾಗುವುದು, ಹಾಗೂ ವ್ಯಾಕುಲತೆಯು ಕಡಿಮೆ ಕಡಿಮೆಯಾಗುವುದು ಮುಂತಾದ ಆರೋಗ್ಯದ ಪ್ರಯೋಜನಗಳನ್ನು ದೃಢಪಡಿಸಿವೆ. ( Science Daily –July 17 2011)
ಮುಸ್ಲಿಮರು ಉಪವಾಸವನ್ನು ಯಾವತ್ತೂ ಆರೋಗ್ಯ ದ ದೃಷ್ಟಿಕೋಣವನ್ನು ಮುಂದಿಟ್ಟು ಹಿಡಿಯುವುದಿಲ್ಲ, ಇಸ್ಲಾಮ್ ಅದನ್ನು ಆ ರೀತಿ ಆರೋಗ್ಯ ಸುಧಾರಣೆಗಾಗಿ ರಮಳಾನ್ ಉಪವಾಸವನ್ನು ಕಡ್ಡಾಯಗೊಳಿಸಿಯೂ ಇಲ್ಲ, ಆದರೆ ಇಸ್ಲಾಮ್ ಪ್ರತಿಪಾದಿಸುವ ಕಡ್ಡಾಯ ಅಥವಾ ಐಚ್ಛಿಕವಾದ ಯಾವುದೇ ಕಾರ್ಯಗಳ ಔಚಿತ್ಯತೆಯನ್ನು ವಿಶ್ಲೇಷಣೆ ಮಾಡುವಾಗ ಮಾನವ ಬುದ್ದಿಗೆ ಗ್ರಾಹ್ಯವಾಗುವ ಮತ್ತು ಗ್ರಾಹ್ಯವಾಗದೇ ಇರುವ ಅನೇಕ ಅಂಶಗಳು ಅವುಗಳಲ್ಲಿ ಅಡಕವಾಗಿವೆ. ಉಪವಾಸ ಮಾತ್ರವಲ್ಲ , ಮನುಷ್ಯ ಜೀವನದಲ್ಲಿ ದಿನ ನಿತ್ಯ ಅವಿಬಾಜ್ಯ ಘಟಕವಾಗಿರುವ ಮಲ-ಮೂತ್ರ ವಿಸರ್ಜನೆ, ಆಹಾರ ಸೇವನೆಯ ಮುಂಚೆ ಮತ್ತು ನಂತರದ ಕೈತೊಳೆಯುವಿಕೆ , ಹೀಗೆ ಅತಿ ಸಣ್ಣ ಸಣ್ಣ ಕಾರ್ಯಗಳ ಶಿಷ್ಟಾಚಾರವನ್ನು ಕೂಡಾ ಬಹಳ ವ್ಯಕ್ತವಾಗಿ ಕಲಿಸಿದ ಪ್ರವಾದಿ ( ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ )ರವರ ಭೋಧನೆಯ ಮಹತ್ವ ಮತ್ತು ವೈಜ್ಞಾನಿಕ ದರ್ಶನ ಇಂದು ಜಗತ್ತಿಗೆ ಗೋಚರವಾಗುತ್ತಿದೆ.
ಇಸ್ಲಾಮ್ ಅಲ್ಲಾಹನ ಧರ್ಮ , ಅದರ ನಿಯಮ ಸಂಹಿತೆಗಳು ಅವನೇ ರೂಪು ಕೊಟ್ಟದ್ದು, ಅದು ಯಾರಿಗೂ ಕ್ಲಿಷ್ಟಕರವಲ್ಲ, ಒತ್ತಡ ಮತ್ತು ಬಲತ್ಕಾರ ವಿಲ್ಲದೇ ಬುದ್ದಿಯ ತೀರ್ಪಿಗೆ ಬಿಟ್ಟು ಅದನ್ನು ಅಂಗೀಕರಿಸಲು ಕರೆನೀಡುತ್ತದೆ, ಜಗತ್ತನ್ನು ಸಂತುಲಿತಾವಸ್ಥೆಯಲ್ಲಿಡಲು ಸೃಷ್ಟಿಕರ್ತನ ನಿಯಮಗಳೇ ಸೂಕ್ತ ಮತ್ತು ಪರ್ಯಾಪ್ತವಾಗಿದ್ದು ಎಂಬುದು ಇಸ್ಲಾಮಿನ ಪ್ರತಿಯೊಂದು ಕಾರ್ಯಗಳ ರಹಸ್ಯವನ್ನು ಭೇದಿಸುವಾಗ ವೇಧ್ಯವಾಗುತ್ತದೆ.